  ಕುಂತಿ  

  ಮಹಾಭಾರತದ ಪ್ರಮುಖ ಸ್ತ್ರೀಪಾತ್ರಗಳಲ್ಲೊಬ್ಬಳು. ಲೋಕೈಕ ವೀರರಾದ ಪಾಂಡವರಿಗೆ ಜನ್ಮ ಕೊಟ್ಟ ಮಹಾಮಾತೆ. ಸಾಕ್ಷಾತ್ ಶ್ರೀಕೃಷ್ಣನ ಸೋದರತ್ತೆ. ಕರ್ಣನಂಥ ಸುಪುತ್ರನಿಧಿಯನ್ನು ಸನ್ನೀವೇಶ ಪ್ರಭಾವದಿಂದ ಅನಿವಾರ್ಯವಾಗಿ ಗಂಗೆಯಲ್ಲಿ ತೇಲಿಬಿಟ್ಟ ನತದೃಷ್ಟೆ.. ಜೀವನದುದ್ದಕ್ಕೂ ಕಷ್ಟವನ್ನೇ ಅನುಭವಿಸಿ ಧೈರ್ಯ, ತಾಳ್ಮೆ ಹಾಗು ಸಹಿಷ್ಣುತೆಗಳಿಗೆ ಹೆಸರಾದವಳು. ಕುಂತಿ ಯದುವಂಶದ ಶೂರರಾಜನ ಮಗಳು. ವಸುದೇವನ ಸೋದರಿ. ಮೂಲತಃ ಇವಳ ಹೆಸರು ಪೃಥೆ ಎಂದು. ಶೂರರಾಜನ ಸೋದರತ್ತೆಯ ಮಗನೂ ಕುಂತಿ ದೇಶದ ಅರಸನೂ ಆದ ಕುಂತಿಭೋಜ ತನಗೆ ಮಕ್ಕಳಿಲ್ಲದ ಕಾರಣ ಪೃಥೆಯನ್ನೇ ದತ್ತು ತೆಗೆದುಕೊಂಡು ಸಾಕಿದ. ಈ ಕಾರಣದಿಂದಾಗಿ ಪೃಥೆಗೆ ಕುಂತಿ ಎಂಬ ಅಡ್ಡ ಹೆಸರೂ ರೂಢಿಯಾಯಿತು. ಈಕೆ ಸಿದ್ಧಿಯ ಅಂಶದಿಂದ ಜನಿಸಿದವಳು. ಶ್ರುತದೇವಾ, ಶ್ರುತಕೀರ್ತಿ, ರಾಜಾಧಿದೇವಿ ಮತ್ತು ಶ್ರುತಶ್ರವೆ ಎಂಬ ನಾಲ್ವರು ಈಕೆಯ ತಂಗಿಯರು.

 ಕುಂತಿ ಇನ್ನೂ ಚಿಕ್ಕವಳಾಗಿದ್ದಾಗ ದೂರ್ವಾಸಮುನಿ ಈಕೆಯ ತಂದೆಯ ಮನೆಯಲ್ಲಿ ಬಂದು ಕೆಲಕಾಲ ತಂಗಿದ. ಆ ಸಮಯದಲ್ಲಿ ಅತನನ್ನು ಅತ್ಯಂತ ಭಯಭಕ್ತಿಯಿಂದ ಕುಂತಿ ಶುಶ್ರೂಷೆ ಮಾಡಿದಳು. ಇದರಿಂದ ಸಂತುಷ್ಟನಾದ ಮಹರ್ಷಿ ಕುಂತಿಗೆ ದಿವ್ಯ ಮಂತ್ರಗಳನ್ನು ಉಪದೇಶಿಸಿ ಅವುಗಳ ಸಹಾಯದಿಂದ ತನಗೆ ಇಷ್ಟ ಬಂದ ದೇವತೆಗಳನ್ನು ಬರಮಾಡಿಕೊಳ್ಳಬಹುದೆಂದು ಹೇಳಿ ಹೊರಟುಹೋದ. ಈ ವರಗಳು ಫಲಿಸುತ್ತವೋ ಇಲ್ಲವೋ ಪರೀಕ್ಷಿಸಬೇಕೆಂಬ ತವಕ ಕುಂತಿಗೆ ಅಧಿಕವಾಯಿತು. ಒಮ್ಮೆ ಮುಂಜಾನೆ, ಉದಯಿಸುತ್ತಿದ್ದ ಸೂರ್ಯದೇವನನ್ನು ಕಂಡು ದೂರ್ವಾಸನಿಂದ ಉಪದೇಶವಾಗಿ ಬಂದ ಸೂರ್ಯಮಂತ್ರವನ್ನು ಉಚ್ಚರಿಸಿದಳು. ತತ್‍ಕ್ಷಣವೇ ಸೂರ್ಯದೇವ ಪ್ರತ್ಯಕ್ಷನಾದ. ಆತನ ಸಾನ್ನಿಧ್ಯದಿಂದ, ಕುಂತಿಗೆ ಮಹಾ ತೇಜಸ್ಸಿನಿಂದ ಹೊಳೆಯುವ ಕರ್ಣಕುಂಡಲಗಳಿಂದ ಕೂಡಿದ ಮಗುವೊಂದು ಲಭ್ಯವಾಯಿತು.

 ಕನ್ಯೆಯಾದ ಕುಂತಿಗೆ ಹೀಗೆ ಅಕಾಲದಲ್ಲಿ ದೊರೆತ ಮಗುವನ್ನು ಕಂಡು ಭಯವಾಗುತ್ತದೆ. ಲೋಕಾಪವಾದಕ್ಕೆ ಹೆದರಿದ ಅಕೆ ನಿಧಿಯನ್ನು ಈಡಾಡುವ ಹಾಗೆ ಅದನ್ನು ಗಂಗೆಯಲ್ಲಿ ತೇಲಿಬಿಟ್ಟುಬಿಡುತ್ತಾಳೆ. ಆ ಮಗುವಿನ ಸಕಲ ಸಂರಕ್ಷಣೆಯ ಭಾರವನ್ನೂ ಗಂಗೆಗೇ ವಹಿಸಬೇಕಾಗುತ್ತದೆ. ಮುಂದೆ ಅ ಮಗು ಸೂತನೊಬ್ಬನಿಗೆ ದೊರೆತು, ಕರ್ಣನೆಂಬ ಅಭಿಧಾನವನ್ನು ಪಡೆದು ಲೋಕವಿಖ್ಯಾತಿಯನ್ನು ಪಡೆಯುತ್ತದೆ. ಕುಂತಿಯ ಬಾಳಿನಲ್ಲಿ ಇದೊಂದು ಅತ್ಯಂತ ಪ್ರಮುಖವಾದ, ಮರೆಯಲಾಗದ ಘಟನೆ; ಮುಂದಿನ ಮಹಾಭಾರತ ಕಥೆಯ ಮೇಲೆ ಮಹತ್ತಾದಂಥ ಪರಿಣಾಮವನ್ನು ಬೀರಿದ ಘಟನೆ. ಕರ್ಣಂಗೊಡ್ಡಿತ್ತುದಲ್ ಭಾರತಂ ಎಂದು ಪಂಪ ಹೇಳುವ ಹಾಗೆ ಕರ್ಣನ ಜನನದ ರಹಸ್ಯ, ಅವನ ಕುಲದ ವಿಷಯ, ಕೌರವನು ಅವನಲ್ಲಿ ತೋರಿದ ಆದರ, ಪಾಂಡವ ಕೌರವರ ಯುದ್ಧದಲ್ಲಿ ಕರ್ಣನ ಪಾತ್ರ, ಕರ್ಣನ ಸಾವು-ಈ ಎಲ್ಲ ಕರ್ಣ ವೃತ್ತಾಂತವನ್ನೂ ನೋಡಿದಾಗ ಈ ಮೊದಲ ಘಟನೆಯ ಪ್ರಾಮುಖ್ಯ ಎದ್ದು ಕಾಣುತ್ತದೆ.

 ಕುಂತಿ ತನಗೆ ಮಗುವಾದ ವಿಷಯವನ್ನು ಯಾರಿಗೂ ತಿಳಿಸದೆ ರಹಸ್ಯವಾಗಿಯೇ ಇಟ್ಟುಬಿಡುತ್ತಾಳೆ. ಇದು ಅಕೆಗಿಂತ ಹೆಚ್ಚಾಗಿ ಕರ್ಣನ ಬದುಕಿನ ಮೇಲೆ ಘೋರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಪ್ರಖ್ಯಾತ ಚಂದ್ರವಂಶದಲ್ಲಿ, ಸೂರ್ಯನ ವರಬಲದಿಂದ, ಕುಂತಿಯ ಗರ್ಭದಲ್ಲಿ ಜನಿಸಿದರೂ ಸೂತಪುತ್ರ ಕುಲಹೀನ ಮೊದಲಾಗಿ ಮೂದಲಿಕೆಗೆ ಒಳಗಾಗಿ ಕರ್ಣ ಬಾಳಬೇಕಾಗುತ್ತದೆ. ಕುಂತಿಯ ಈ ಒಂದು ಅಚಾತುರ್ಯದಿಂದ ಕರ್ಣ ತನ್ನ ಒಡಹುಟ್ಟಿದ ಸೋದರರೊಂದಿಗೇ ಯುದ್ಧ ಮಾಡಿ ಅವರಿಂದಲೇ ಮೃತನಾಗಬೇಕಾಗುತ್ತದೆ.

 ತರುವಾಯ, ಭೀಷ್ಮ ಕುಂತಿಯನ್ನು ತಂದು ಪಾಂಡುರಾಜನಿಗೆ ಮದುವೆ ಮಾಡುತ್ತಾನೆ. ಪಾಂಡು ತನಗೆ ಬಹಳ ಕಾಲ ಮಕ್ಕಳಾಗದೆ ಇದ್ದುದರಿಂದ ತುಂಬ ಚಿಂತಾಕ್ರಾಂತನಾಗುತ್ತಾನೆ. ಅವನು ಒಮ್ಮೆ ಕುಂತಿಯನ್ನು ಏಕಾಂತದಲ್ಲಿ ಕರೆದು, ಯಾವನಾದರೂ ಒಬ್ಬ ತಪಸ್ವಿಯಾದ ಬ್ರಾಹ್ಮಣನಿಂದ ಪುತ್ರನನ್ನು ಪಡೆಯುವುದಕ್ಕೆ ಯತ್ನಿಸು ಎಂಬುದಾಗಿ ಸೂಚಿಸುತ್ತಾನೆ. ಅದರೆ ಪತಿವ್ರತೆಯಾದ ಕುಂತಿ ಅದಕ್ಕೆ ಸಮ್ಮತಿಸುವುದಿಲ್ಲ. ಅದಕ್ಕೆ ಬದಲಾಗಿ ಬಾಲ್ಯದಲ್ಲಿ ತನಗೆ ದೊರೆತ ದೂರ್ವಾಸ ಮಂತ್ರಗಳನ್ನು ತಿಳಿಸಿ ಅದರ ಸಹಾಯದಿಂದ ಮಕ್ಕಳನ್ನು ಪಡೆಯಬಹುದು ಎಂಬುದಾಗಿ ತಿಳಿಸುತ್ತಾಳೆ. ಅನಂತರ ಪಾಂಡುವಿನ ಅಜ್ಞೆಯಂತೆ ಧರ್ಮನನ್ನು ನೆನೆದು ಅವನ ನೆರವಿನಿಂದ ಯುಧಿಷ್ಠಿರನನ್ನು ಪಡೆಯುತ್ತಾಳೆ; ಕ್ರಮೇಣ ವಾಯುವಿನ ನೆರವಿನಿಂದ ಭೀಮನನ್ನೂ ದೇವೇಂದ್ರನ ನೆರವಿನಿಂದ ಅರ್ಜುನನನ್ನೂ ಪಡೆಯುತ್ತಾಳೆ. ಮಹಾದೈವ ಶಕ್ತಿಗಳ ವರಬಲದಿಂದ ಜನಿಸಿದ ಈ ಮಕ್ಕಳು ಮುಂದೆ ಅಪ್ರತಿಮ ಸಾಹಸಿಗಳಾಗಿ, ತೇಜೋವಂತರಾಗಿ ಶೋಭಿಸುತ್ತಾರೆ. ಪಾಂಡುವಿನ ಕಿರಿಯ ಹೆಂಡತಿಯಾದ ಮಾದ್ರಿ ಕುಂತಿಗೆ ಮಕ್ಕಳಾಗಿ ತನಗೆ ಮಕ್ಕಳಾಗದೆ ಇದ್ದುದರಿಂದ ಸಂಕಟಕ್ಕೆ ಒಳಗಾಗುತ್ತಾಳೆ. ಪಾಂಡು ಅವಳಿಗೂ ಮಂತ್ರವನ್ನು ಉಪದೇಶಿಸುವಂತೆ ಕುಂತಿಯನ್ನು ಕೇಳಿಕೊಳ್ಳುತ್ತಾನೆ. ಕುಂತಿ ಮಾದ್ರಿಗೆ ಮಂತ್ರವೊಂದನ್ನು ಉಪದೇಶಿಸಿ ಇದರ ಸಹಾಯದಿಂದ ಒಬ್ಬ ಮಗನನ್ನು ಪಡೆಯುವಂತೆ ಹೇಳುತ್ತಾಳೆ. ಅದರೆ ಬುದ್ದಿವಂತೆಯಾದ ಮಾದ್ರಿ ಆ ಮಂತ್ರದ ಬಲದಿಂದ ಅಶ್ವಿನೀದೇವತೆಗಳನ್ನು ನೆನೆದು ಅವಳಿ ಮಕ್ಕಳನ್ನು ಪಡೆಯುತ್ತಾಳೆ. ಅವರೇ ನಕುಲ, ಸಹದೇವರು.

 ಇದಲ್ಲದೆ, ಪಾಂಡು ಕುಂತಿಯನ್ನು ಇನ್ನೂ ಒಬ್ಬ ಮಗನನ್ನು ಪಡೆಯುವಂತೆ ಪ್ರೇರೇಪಿಸಿದ್ದುಂಟು. ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಲು ಯಾವ ಆಪದ್ಧರ್ಮವೂ ಒಪ್ಪುವುದಿಲ್ಲವಾದ್ದರಿಂದ ನಾಲ್ಕನೆಯ ಮಗನನ್ನು ಪಡೆದರೆ ತಾನು ಸ್ವೇಚ್ಛಾಚಾರಿಣಿಯಾದೇನು ಎಂದು ಕುಂತಿ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾಳೆ. 

 ಒಮ್ಮೆ ಪಾಂಡು ಅರಣ್ಯದಲ್ಲಿ ಮಾದ್ರಿಯನ್ನು ಭೋಗಿಸಿ, ಋಷಿ ಶಾಪದಂತೆ ಮೃತನಾದ್ದರಿಂದ, ಮಾದ್ರಿ ಅವನ ಜೊತೆಯಲ್ಲೇ ಸಹಗಮನ ಮಾಡುತ್ತಾಳೆ. ಕುಂತಿ ಐವರು ಮಕ್ಕಳ ಪೋಷಣೆಯ ಹೊರೆಯನ್ನು ಹೊತ್ತು ಹಸ್ತಿನಾಪುರ ಸೇರುತ್ತಾಳೆ.

 ಮುಂದೆ, ವಾರಣಾವತದಲ್ಲಿ ಅರಗಿನ ಮನೆಯಿಂದ ತಪ್ಪಿಸಿಕೊಂಡ ಪಾಂಡವರು ಕೆಲವು ಸಮಯದ ಮೇಲೆ ಬ್ರಾಹ್ಮಣ ವೇಷವನ್ನು ಧರಿಸಿ ಏಕಚಕ್ರ ನಗರವನ್ನು ಸೇರಿ ಅಲ್ಲಿನ ಒಬ್ಬ ಬ್ರಾಹ್ಮಣನ ಮನೆಯಲ್ಲಿ ವಾಸವಾಗಿರುತ್ತಾರೆ. ಅ ಮನೆಯಲ್ಲಿ ಸರದಿಯಂತೆ ಯಾರಾದರೊಬ್ಬರು ಅ ದಿನ ಬಕಾಸುರನಿಗೆ ಬಲಿಯಾಗಬೇಕಾದ್ದರಿಂದ ತುಂಬ ದುಃಖಿಸುತ್ತಿರುತ್ತಾರೆ. ಇದನ್ನು ತಿಳಿದ ಕುಂತಿ ಅವರನ್ನು ಸಮಾಧಾನಪಡಿಸಿ ಬಂಡಿ ಅನ್ನದ ಜೊತೆಯಲ್ಲಿ ಭೀಮನನ್ನು ಕಳುಹಿಸುತ್ತಾಳೆ. ಭೀಮನಿಂದ ಬಕಾಸುರನ ಸಂಹಾರವಾಗುತ್ತದೆ. ಇಲ್ಲಿ ಕುಂತಿಯ ದಯಾಪರತೆ, ಕೃತಜ್ಞತೆ ಮತ್ತು ಪರೋಪಕಾರ ಬುದ್ಧಿ ಎದ್ದು ಕಾಣುತ್ತವೆ. ಭೀಮ ರಾಕ್ಷಸನಿಗಿಂತ ಬಲಶಾಲಿ ಎಂಬುದು ಕುಂತಿಗೆ ಗೊತ್ತಿದ್ದರೂ ರಾಕ್ಷಸನ ಬಳಿಗೆ ಮಗನನ್ನು ಕಳಿಸುವುದು ಸಾಮಾನ್ಯ ಸ್ತ್ರೀಗೆ ಅಸಾಧ್ಯಾವಾದುದು. ಕುಂತಿ ಅಸದೃಶ ಧೈರ್ಯಶಾಲಿ ಎಂಬುದೂ ಇಲ್ಲಿ ವ್ಯಕ್ತವಾಗುತ್ತದೆ. ದ್ರುಪದ ಏರ್ಪಡಿಸಿದ್ದ ಸ್ವಯಂವರದಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪತಿಯನ್ನು ಗೆದ್ದು ತಂದ ಪಾಂಡವರು ತಾಯಿಯ ಮಾತನ್ನು ಮೀರಲಾರದೆ ಐವರೂ ಅಕೆಯನ್ನು ವರಿಸಬೇಕಾಗುತ್ತದೆ.

 ಮುಂದೆ ಪಾಂಡವರು ಜೂಜಿನಲ್ಲಿ ಸೋತು ರಾಜ್ಯವನ್ನು ಕಳೆದುಕೊಂಡು ಕಾಡಿಗೆ ಹೋಗಬೇಕಾಗಿ ಬಂದಾಗ ಕುಂತಿ ವಿದುರನ ಮನೆಯಲ್ಲಿಯೇ ಉಳಿದುಕೊಳ್ಳುತ್ತಾಳೆ. ವನವಾಸ ಕಳೆದ ಮೇಲೆ ಪಾಂಡವರ ರಾಯಭಾರಿಯಾಗಿ ದುರ್ಯೋಧನನಲ್ಲಿಗೆ ಬಂದ ಶ್ರೀಕೃಷ್ಣ ವಿದುರನ ಮನೆಯಲ್ಲಿ ಉಳಿದುಕೊಂಡಾಗ ಕುಂತಿ ಅವನನ್ನು ಸಂದರ್ಶಿಸುತ್ತಾಳೆ. ಉಪ್ಪರಿಗೆಗಳಲ್ಲಿ ಹಂಸತೂಲಿಕಾತಲ್ಪದ ಮೇಲೆ ಮಲಗಿ ನಿದ್ರೆ ಮಾಡಿ ಬೆಳಗ್ಗೆ ಮಂಗಳವಾದ್ಯಗಳಿಂದಲೂ ವಂದಿಮಾಗಧರ ಸ್ತೋತ್ರದಿಂದಲೂ ಎಚ್ಚರಗೊಳ್ಳುತ್ತಿದ್ದ ನನ್ನ ಮಕ್ಕಳು ಕೃಷ್ಣಾಜಿನದ ಮೇಲೆ ಮಲಗಿ ಕಾಡುಮೃಗಗಳ ಕೂಗಿನಿಂದ ಎಚ್ಚರಗೊಳ್ಳುವ ಹಾಗಾಯಿತಲ್ಲ-ಎಂದು ದುಃಖಿಸುತ್ತಾಳೆ. ಕೃಷ್ಣ ಪಾಂಡವರ ಕ್ಷೇಮವನ್ನೂ ಮುಂದಿನ ಶುಭವನ್ನೂ ತಿಳಿಸಿ ಅಕೆಯನ್ನು ಸಮಾಧಾನಪಡಿಸುತ್ತಾನೆ. ಸಂಧಿಯ ಪ್ರಯತ್ನ ವಿಫಲವಾಗಲಾಗಿ ಅರಮನೆಯಿಂದ ಹೊರಟುಬಂದ ಕೃಷ್ಣನ ಕೈಲಿ ತನ್ನ ಮಕ್ಕಳು ಕ್ಷತ್ರಿಯೋಚಿತವಾಗಿ ಕೌರವರ ಮೇಲೆ ಯುದ್ಧ ಮಾಡುವುದೇ ನ್ಯಾಯವೆಂದು ಕುಂತಿ ಹೇಳಿಕಳುಹಿಸುತ್ತಾಳೆ.

 ಬಳಿಕ ಕುಂತಿ ವ್ಯಾಪಾರ ಮನೋಭಾವನೆಯಿಂದ ಗಂಗಾತೀರದಲ್ಲಿ ಕರ್ಣನನ್ನು ಸಂಧಿಸುತ್ತಾಳೆ. ಕರ್ಣ ನೀನು ನನ್ನ ಮಗ, ಪಾಂಡವರು ನಿನ್ನ ಸೋದರರು. ಸೂರ್ಯದೇವನೇ ನಿನ್ನ ತಂದೆ, ಅದ್ದರಿಂದ ಈಗ ನೀನು ನಮ್ಮ ಕಡೆ ಬಂದುಬಿಡು ಎಂದು ಕರೆಯುತ್ತಾಳೆ. ಮಹಾಸ್ವಾಮಿಭಕ್ತನಾದ ಕರ್ಣ ಅದನ್ನು ನಿರಾಕರಿಸುವುದು ತಿಳಿದಿರುವ ವಿಷಯವೇ ಆಗಿದೆ. ಆದರೆ ಅರ್ಜುನನ್ನುಳಿದು, ಉಳಿದ ನಾಲ್ವರನ್ನು ಕೊಲ್ಲುವುದಿಲ್ಲ ಎಂಬುದಾಗಿ ಕರ್ಣ ಮಾತು ಕೊಡುತ್ತಾನೆ. ಕೊನೆಗೆ ತೊಟ್ಟ ಬಾಣವನ್ನು ತೊಡಬೇಡ ಎಂಬುದಾಗಿ ಹೇಳಿ ಕರ್ಣನಿಂದ ಅಶ್ವಾಸನೆ ಪಡೆದು ಕುಂತಿ ಹಿಂತಿರುಗುತ್ತಾಳೆ. ಇಲ್ಲೆಲ್ಲ ಕುಂತಿಯ ಒಳತೋಟಿಯ ಚಿತ್ರಣ ಹೃದಯ ವಿದ್ರಾವಕವಾಗಿ ವರ್ಣಿತವಾಗಿದೆ.

 ಕುರುಕ್ಷೇತ್ರದ ಯುದ್ಧ ಮುಗಿದ ತರುವಾಯ ಕರ್ಣನ ಕಳೇಬರವನ್ನು ಕಂಡು ಕುಂತಿ ಅತೀವವಾಗಿ ದುಃಖಿಸುತ್ತಾಳೆ. ಅಲ್ಲದೆ ಯುದ್ಧದಲ್ಲಿ ಮಡಿದ ಜ್ಞಾತಿ, ಬಂಧುಗಳಿಗೆಲ್ಲ ತಿಲೋದಕವನ್ನು ಕೊಡುವ ಸಮಯದಲ್ಲಿ ಕರ್ಣ ತನ್ನ ಹಿರಿಯ ಮಗನೆಂದೂ ಅವನಿಗೆ ಮೊತ್ತಮೊದಲು ಜಲತರ್ಪಣವನ್ನು ಕೊಡಬೇಕೆಂದೂ ಧರ್ಮರಾಯನಿಗೆ ಕುಂತಿ ತಿಳಿಸುತ್ತಾಳೆ; ಧರ್ಮರಾಯ ಪಟ್ಟಾಭಿಷಿಕ್ತನಾದ ಮೇಲೆಯೂ ಕರ್ಣನ ವಧೆಯಿಂದ ಸಂತಾಪ ಪಡುತ್ತಲೇ ಇರುತ್ತಾಳೆ. ಇದೇ ವ್ಯಥೆಯಿಂದ ಧೃತರಾಷ್ಟ್ರ ಮತ್ತು ಗಾಂಧಾರಿಯರೊಂದಿಗೆ ಅರಣ್ಯಕ್ಕೆ ತಪಸ್ಸಿಗಾಗಿ ಹೋಗುತ್ತಾಳೆ. ಪಾಂಡವರು ಎಷ್ಟೇ ವಿಧದಿಂದ ತಡೆದರೂ ಪ್ರಯೋಜನವಾಗುವುದಿಲ್ಲ ಮಕ್ಕಳೆಲ್ಲ ಅರಣ್ಯಕ್ಕೇ ಹೋಗಿ ಅಂಗಲಾಚಿ ಕರೆದರೂ ಅಕೆ ಹಿಂತಿರುಗುವುದಿಲ್ಲ. ತನ್ನ ಕೈಲಾದ ಮಟ್ಟಿಗೂ ಧೃತರಾಷ್ಟ್ರ ಮತ್ತು ಗಾಂಧಾರಿಯನ್ನು ಸೇವಿಸಿಕೊಂಡು ತಪಸ್ಸಿನಲ್ಲಿ ನಿರತಳಾಗಿದ್ದುಬಿಡುತ್ತಾಳೆ. ಒಮ್ಮೆ ವ್ಯಾಸ ಅವಳಿದ್ದ ಅಶ್ರಮಕ್ಕೆ ಬರುತ್ತಾನೆ. ಕುಂತಿಯ ಬಯಕೆಯಂತೆ ಕರ್ಣನನ್ನು ನೀರಿನ ಮಧ್ಯದಲ್ಲಿ ಮತ್ತೆ ತೋರಿಸುತ್ತಾನೆ. ಇದಾದ ಕೆಲವು ದಿವಸಗಳ ತರುವಾಯ ವ್ಯಾಸರ ಅನುಮತಿಯಂತೆ ಕುಂತಿ ದಾವಾಗ್ನಿಯನ್ನು ಹೊಕ್ಕು ಮೃತಳಾಗುತ್ತಾಳೆ.

 ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲ ಎಂಬ ಗಾದೆಗೆ ಬದಲಾಗಿ ಅಂತೂ ಇಂತೂ ಕುಂತಿಗೆ ಸುಖವಿಲ್ಲ ಎಂದು ಹೇಳಿದರೆ ಹೆಚ್ಚು ನಿಜವಾಗುತ್ತದೆ ಎಂದಿರುವ ಎ.ಅರ್.ಕೃ. ಅವರ ಮಾತು ಸತ್ಯವಾದುದು. ಕುಂತಿ ಜೀವನದುದ್ದಕ್ಕೂ ಕಷ್ಟಪಡುವುದೇ ಆಯಿತು. ಪಾಂಡವರು ವನವಾಸವೆಲ್ಲ ಮುಗಿದಮೇಲೆ ಯುದ್ಧದಲ್ಲಿ ಶತ್ರುಗಳನ್ನು ಗೆದ್ದು ರಾಜ್ಯಭಾರ ಮಾಡುವ ಸಮಯದಲ್ಲಿ ಕುಂತಿ ಸುಖಪಡಬಹುದಿತ್ತು. ಆದರೆ ಅದನ್ನು ಬಯಸದೆ ಆಕೆ ಅರಣ್ಯಕ್ಕೆ ಹೋಗುತ್ತಾಳೆ. ಹೀಗೆ ಧೈರ್ಯ, ತಾಳ್ಮೆ, ಪರೋಪಕಾರ, ತ್ಯಾಗ ಮತ್ತು ಕಷ್ಟಸಹಿಷ್ಣುತೆಗಳಿಗೆ ಕುಂತಿ ಹೆಸರಾದವಳು; ಗೌರವಕ್ಕೆ ಪಾತ್ರಳಾದವಳು.

ಇಪ್ಪತ್ತನೆಯ ಶತಮಾನದಲ್ಲೂ ಈಕೆ ಅರಾಧ್ಯಮೂರ್ತಿಯಾಗಿದ್ದಾಳೆ. ಜನಪದದಲ್ಲಿ ಕುಂತಿ ಎಂದರೆ ತುಂಬ ಗೌರವ. ಪೌರಾಣಿಕ ವ್ಯಕ್ತಿಯಾದ ಕುಂತಿಯನ್ನು ದೇವತೆಯನ್ನಾಗಿ ಕಲ್ಪಿಸಿಕೊಂಡು ಪೂಜಿಸುವ ಸಂಪ್ರದಾಯ ಕರ್ಣಾಟಕದ ಅನೇಕ ಜಿಲ್ಲೆಗಳಲ್ಲಿ ರೂಢಿಯಲ್ಲಿದೆ. ಡಿ. ಲಿಂಗಯ್ಯನವರು ತಮ್ಮ ಕೊಂತಿ ಪೂಜೆ ಎಂಬ ಪ್ರಬಂಧದಲ್ಲಿ ವಿವರವಾಗಿ ಈ ಬಗ್ಗೆ ಚರ್ಚಿಸಿದ್ದಾರೆ. ಕುಂತಿಯನ್ನು ಹಳ್ಳಿಗರು ಕೊಂತಿ ಎಂಬುದಾಗಿ ಕರೆಯುತ್ತಾರೆ. ಈ ಸಂಬಂಧವಾದ ಪೂಜೆಯೇ ಕೊಂತಿ ಪೂಜೆ ಪ್ರತಿವರ್ಷದ ಕಾರ್ತಿಕದಲ್ಲಿ ಬೆಳದಿಂಗಳಿರುವ ರಾತ್ರಿಗಳಲ್ಲಿ ನಿರಂತರವಾಗಿ ಹದಿನಾರು ದಿವಸಗಳು ಈ ಪೂಜೆ ನಡೆಯುತ್ತದೆ. ಯಾರಾದರೊಬ್ಬರ ಮನೆಯಲ್ಲಿ ಎರೆಯ ಮಣ್ಣಿನಿಂದ ಮಾಡಿದ ಸ್ತ್ರೀವಿಗ್ರಹವನ್ನು ಕೂರಿಸಿ ಪೂಜಿಸುತ್ತಾರೆ. ಊರ ಸ್ತ್ರೀಯರು ಸೇರಿ ಕುಂತಿಗೆ ಸಂಬಂಧ ಪಟ್ಟ ಹಾಡುಗಳನ್ನು ಹಾಡುತ್ತಾರೆ. ಹೀಗೆ ಹದಿನಾರು ದಿವಸಗಳು ಕಳೆದ ಮೇಲೆ ಗಣಪತಿಯನ್ನು ವಿಸರ್ಜಿಸುವಂತೆ ಕೆರೆಗೋ ಹರಿಯುವ ಹಳ್ಳಕ್ಕೋ ತೆಗೆದುಕೊಂಡು ಹೋಗಿ ವಿಸರ್ಜಿಸುತ್ತಾರೆ.               

 (ಎಂ.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ